ಮಹಾರಾಷ್ಟ್ರ: ರೈತ ಶಕ್ತಿಯ ಅನಾವರಣ: ರೈತರ ಕೈಹಿಡಿದ ಮಹಾ ಸರಕಾರ….

0
58

ಮಹಾರಾಷ್ಟ್ರದಲ್ಲಿ ಅನ್ನದಾತರ ಬೃಹತ್ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಕಳೆದ ಆರರಂದು ನಾಶಿಕ್‌ನಿಂದ ಆರಂಭವಾದ ಜಾಥಾ ಮುಂಬಯಿಯಲ್ಲಿ ಕೊನೆಗೊಂಡಿದೆ. ತಮ್ಮ ಹಕ್ಕಿಗಾಗಿ ರೈತರು ನಡೆಸಿದ ಶಿಸ್ತಿನ ಜಾಥಾ, ತೋರಿದ ಸ್ಥೈರ್ಯ, ಹೋರಾಟದ ಕಾವಿಗೆ ದೇವೇಂದ್ರ ಫಡ್ನವಿಸ್ ಸರಕಾರ ಮಣಿದಿದೆ. ಒಂದು ವಾರ ಇಡೀ ಮಹಾರಾಷ್ಟ್ರವನ್ನು ತುದಿಗಾಲ ಮೇಲೆೆ ನಿಲ್ಲಿಸಿದ್ದ ರೈತರ ಪ್ರತಿಭಟನೆ ಕೊನೆಗೂ ಸರಕಾರದ ಕಿವಿ ಹಿಂಡಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಸಫಲವಾಗಿದೆ.

ಹಾಗೆನೋಡಿದರೆ ಕಳೆದ ಆರೆಂಟು ತಿಂಗಳಲ್ಲಿ ದೇಶದ ನಾನಾ ಭಾಗಗಳಲ್ಲಿ ರೈತರ ಹಕ್ಕಿನ ಕೂಗು ಮಾರ್ದನಿಸುತ್ತಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ನಡೆದ ರೈತ ಪ್ರತಿಭಟನೆ ಸುಮಾರು 11 ದಿನಗಳವರೆಗೆ ನಿರಂತರವಾಗಿ ಸಾಗಿ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಬಿಸಿ ಮುಟ್ಟಿಸಿತ್ತು. ನ್ಯಾಯಯುತ ಬೆಂಬಲ ಬೆಲೆ, ಸಾಲ ಮನ್ನಾ ಇವೇ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ನಡೆಸಿದ ಚಳವಳಿಯ ಗಾಢತೆ ಅರ್ಥ ಮಾಡಿಕೊಳ್ಳದ ಅಲ್ಲಿನ ಸರಕಾರ ಗೋಲಿಬಾರ್ ನಡೆಸಿ ಐವರು ರೈತರ ಸಾವಿಗೆ ಕಾರಣವಾಗಿತ್ತು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಮುಖ್ಯಮಂತ್ರಿ ಚೌಹಾಣ್ ಖುದ್ದಾಗಿ ರೈತರ ಬಳಿ ತೆರಳಿ ಅವರ ಬೇಡಿಕೆಗಳನ್ನು ಈಡೇರಿಸುವ ನೀಡಿದ ಬಳಿಕವಷ್ಟೇ ಪರಿಸ್ಥಿತಿ ತಿಳಿಯಾಗಿತ್ತು. ಇನ್ನು ಮಹಾರಾಷ್ಟ್ರದಲ್ಲಿ ಕಳೆದ ಆಗಸ್‌ಟ್ ತಿಂಗಳಲ್ಲಿ ಸಾಲಮನ್ನಾ ವಿಷಯವಾಗಿ ಸರಕಾರದ ಅನಾದರ ಧೋರಣೆ ಖಂಡಿಸಿ ಹಲವು ದಿನಗಳ ಕಾಲ ರೈತರು ಬೀದಿಗಿಳಿದು ಪ್ರತಿಭಟಿಸಬೇಕಾಯಿತು. ಪ್ರತಿಭಟನೆಯ ಬಿಸಿಗೆ ಬೆಚ್ಚಿ ಫಡ್ನವಿಸ್ ಸರಕಾರ ಸಾಲ ಮನ್ನಾ ಘೋಷಿಸಿತ್ತು. ಇದೇ ರೀತಿ ರಾಜಾಸ್ಥಾನ, ತಮಿಳುನಾಡಿನಲ್ಲಿ ಸಹ ರೈತರು ಜೋರು ಪ್ರತಿಭಟನೆ ನಡೆಸಿದ್ದರು. ಇದೀಗ ಮಹಾರಾಷ್ಟ್ರದ ರೈತರು ಮತ್ತು ಅರಣ್ಯಗಳಲ್ಲಿ ಒಕ್ಕಲು ಮಾಡುವ ಬುಡಕಟ್ಟು ಜನ ತಮ್ಮ ವಿವಿಧ ಬೀದಿಗೆ ಬಂದಿದ್ದರು.ಜನಾಂದೋಲನಗಳನ್ನು ಹತ್ತಿಕ್ಕಲು ಆಡಳಿತಶಾಹಿ ನಾನಾ ತಂತ್ರಗಳನ್ನು ಮಾಡುತ್ತದೆ. ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಪ್ರತಿಭಟನೆಯ ದಿಕ್ಕು ತಪ್ಪಿಸಲು ನೋಡಿದ್ದರು. ಪ್ರತಿಭಟನೆಗೆ ಬಂದಿರುವವರು ರೈತರೇ ಆಲ್ಲ ಅವರು ಬುಡಕಟ್ಟು ಜನರಷ್ಟೇ ಎಂದು ವಿಧಾನಸಭೆಯಲ್ಲಿಯೇ ಆರೋಪಿಸಿದ್ದರು. ಇದೇ ರೀತಿ ಬಿಜೆಪಿಯ ಪ್ರಮುಖರು ಪ್ರತಿಭಟನೆಗೆ ಬಂದವರನ್ನು ನಗರವಾಸಿ ನಕ್ಸಲರು ಎಂದು ಟೀಕಿಸಿದ್ದರು. ಆದರೆ ರೈತರು ಇದಾವುದಕ್ಕೂ ಜಗ್ಗದೇ ಪ್ರತಿಭಟನೆ ಮುಂದುವರಿಸಿದರು ಮಾತ್ರವಲ್ಲದೇ ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೇ ಕೇವಲ ತಮ್ಮ ಹಕ್ಕಿನ ಮುಂದಾಗಿದ್ದು ಸರಕಾರದ ಕೈ ಕಟ್ಟಿಹಾಕಿತು. ಜನರಿಂದಲೇ ರೂಪಿತವಾಗುವ ಸರಕಾರಗಳು ಜನದನಿಗೆ ಕಿವಿಗೊಡದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮಹಾರಾಷ್ಟ್ರದ ರೈತರು ನಿರೂಪಿಸಿದ್ದಾರೆ.

ವರದಿಗಾರರು: ಹಣಮಂತ ಎಂ ಮೀಶಿ ಪ್ರಜಾರಾಜ್ಯ ನ್ಯೂಸ್ ಬೆಳಗಾವಿ/ಅಥಣಿ

LEAVE A REPLY

Please enter your comment!
Please enter your name here