ಬೆಂಗಳೂರು: ಸರ್ಕಾರಕ್ಕೆ ಪತ್ರ ಬರೆದ ಅಧಿಕಾರಿಗೆ ತನಿಖೆ ಗುದ್ದು!

0
32

ಐಪಿಎಸ್ ಬೆನ್ನು ಬಿದ್ದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗಳು ಮತ್ತು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಐಪಿಎಸ್ ಅಧಿಕಾರಿಗಳ ಸಂಘ ಪತ್ರ ಮುಖೇನ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಸರ್ಕಾರವೀಗ ಪತ್ರ ಬರೆದ ಅಧಿಕಾರಿಯ ಬೆನ್ನು ಬಿದ್ದಿದೆ.

ಅಧಿಕಾರಿ ವಿರುದ್ಧ ಆಂತರಿಕ ತನಿಖೆ ನಡೆಸಿ ಕ್ರಮಕೈಗೊಳ್ಳುವ ಜತೆಗೆ, ಯಾರ ಕುಮ್ಮಕ್ಕಿನಿಂದ ಪತ್ರ ಬರೆಯಲಾಯಿತೆಂಬುದನ್ನು ಪತ್ತೆ ಹಚ್ಚಲು ಗೂಢಚರ್ಯು ಆರಂಭಿಸಿದೆ. ‘ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯ ಆತ್ಮಸ್ಥೈರ್ಯ ಕುಗ್ಗಿಸುವ ಬೆಳವಣಿಗೆಗಳು ನಡೆದಿದ್ದು, ವರ್ಗಾವಣೆ ವ್ಯವಸ್ಥೆ ಸರಿ ಇಲ್ಲ. ಪ್ರಮುಖ ಹೈ ಪ್ರೊಫೈಲ್ ಪ್ರಕರಣಗಳನ್ನು ರಾಜಕೀಯ ಪ್ರಭಾವ ಹೈಜಾಕ್ ಮಾಡುತ್ತಿದೆ’ ಎಂದು ಉಲ್ಲೇಖಿಸಿ ಐಪಿಎಸ್ ಅಸೋಸಿಯೇಷನ್​ನಿಂದ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿತ್ತು. ಇದರಿಂದ ತೀವ್ರ ಮುಜುಗರಕ್ಕೊಳಗಾದ ಸರ್ಕಾರ, ಭಾನುವಾರ ಸಂಜೆಯಿಂದಲೇ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಯಿತು.

ಅಲ್ಲದೆ ಸಿಎಂ ಕಚೇರಿಯಿಂದಲೇ ಐಪಿಎಸ್ ಅಸೋಸಿಯೇಷನ್ ಕಾರ್ಯದರ್ಶಿಯಿಂದ ಬಂದಿತೆನ್ನಲಾದ ಪ್ರತಿಕ್ರಿಯೆಯನ್ನು ಮಾಧ್ಯಮಗಳಿಗೆ ಹರಿಯಬಿಡಲಾಯಿತು. ಅಸೋಸಿಯೇಷನ್​ಗೂ ಪತ್ರಕ್ಕೂ ಸಂಬಂಧವೇ ಇಲ್ಲ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆಂದು ಸಿಎಂ ಕಚೇರಿ ಹೇಳಿತೇ ಹೊರತು ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ವಾಸ್ತವವಾಗಿ ಪತ್ರ ಬರೆದಿದ್ದು ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಎಡಿಜಿಪಿ ರಾಜೀವ್ ಪ್ರತಾಪ್ ಶರ್ವ. ಇದೀಗ ಅವರ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲಿಸಲು ಸಿಎಂ ಕಚೇರಿಯಿಂದ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ಹೋಗಿದೆ ಎಂದು ಉನ್ನತಮೂಲಗಳು ವಿಜಯವಾಣಿಗೆ ಸ್ಪಷ್ಟಪಡಿಸಿವೆ.

ಬಿಜೆಪಿ ಕೈವಾಡದ ಆರೋಪ: ಬೆಳವಣಿಗೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಿಎಂ ಆತ್ಮೀಯರು ಶಂಕೆ ವ್ಯಕ್ತಪಡಿಸಿದ್ದು, ಪತ್ರ ಬರೆದ ಎಡಿಜಿಪಿ ರಾಜೀವ್ ಪ್ರತಾಪ್ ಶರ್ಮಾ ಅವರ 3 ತಿಂಗಳ ಮೊಬೈಲ್ ಕಾಲ್ ಡೀಟೈಲ್ ತೆಗೆಸುವ ಕೆಲಸ ಆರಂಭಿಸಿದ್ದಾರೆಂದು ಗೊತ್ತಾಗಿದೆ. ಶರ್ಮಾ ಅವರಿಗೆ ಯಾರಿಂದ ನಿರಂತರ ಕರೆ ಬಂದಿದೆ ಮತ್ತು ಅವರು ಯಾವ ರಾಜಕಾರಣಿಯ ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆಹಚ್ಚುವ ಕೆಲಸ ಆರಂಭವಾಗಿದೆ.

ಇನ್ನು ಸಿಎಂ ಈ ಬೆಳವಣಿಗೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮುಖೇನ ರ್ಚಚಿಸಿ, ಈ ವಿಷಯ ಮುಂದುವರಿಯದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದ್ದಾರೆಂದು ತಿಳಿದುಬಂದಿದೆ.

ಮುಖ್ಯ ಕಾರ್ಯದರ್ಶಿಗೆ ಅಧಿಕಾರಿಯೊಬ್ಬರು ಪತ್ರ ಬರೆದರೆ ಅದನ್ನು ಐಪಿಎಸ್ ಅಧಿಕಾರಿಗಳ ಬಂಡಾಯವೆಂದು ಪರಿಗಣಿಸಬೇಕೇ? ಪತ್ರದಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಆದರೆ ಅಧಿಕಾರಿಗಳ ದೈನಂದಿನ ಕರ್ತವ್ಯ ನಿರ್ವಹಣೆ ವೇಳೆ ಸಂಪುಟ ಸಹೋದ್ಯೋಗಿಗಳಾಗಲಿ, ಪಕ್ಷದ ಶಾಸಕರಾಗಲಿ ಹಸ್ತಕ್ಷೇಪ ಮಾಡಿಲ್ಲ.

| ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜ್ಯದಲ್ಲಿ ದುರಾಡಳಿತ ನಡೆಯುತ್ತಿದೆ ಎಂಬುದಕ್ಕೆ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಸಿಇಒಗೆ ಬರೆದಿರುವ ಪತ್ರವೇ ಸಾಕ್ಷಿ. ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತವನ್ನು ಮುಗಿಸಿದೆ. ಕರ್ನಾಟಕ ಗೂಂಡಾ ರಾಜ್ಯವಾಗಿದ್ದು, ಕೆಂಪಯ್ಯ ಹೇಳಿದ ಹಾಗೆ ಗೃಹ ಇಲಾಖೆ ನಡೆಯುತ್ತಿದೆ.

| ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷದ ನಾಯಕ

ಶರ್ಮಾ ವಿಚಾರ ಮಾಧ್ಯಮ ಗಳಲ್ಲಿ ನೋಡಿದ್ದೇನೆ. ಪತ್ರದಲ್ಲಿ ಏನಿದೆ ಎಂದು ಗೊತ್ತಿಲ್ಲ. ಆ ಕುರಿತು ತಿಳಿದು ಪ್ರತಿಕ್ರಿಯೆ ನೀಡುತ್ತೇನೆ. ನಾರಾಯಣ ಸ್ವಾಮಿ ಹಾಗೂ ಹ್ಯಾರಿಸ್ ಪುತ್ರನ ಮೇಲೆ ಪಕ್ಷ ಕ್ರಮ ತೆಗೆದುಕೊಂಡಿದೆ.

| ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

LEAVE A REPLY

Please enter your comment!
Please enter your name here