ಬೆಂಗಳೂರು: ರಾಜ್ಯ ಹೈಕೋರ್ಟ್ ನಿಂದ ಸರಕಾರಕ್ಕೆ ನಿರ್ದೇಶನ: ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಶನ್ ಪಡೆಯುವಂತಿಲ್ಲ

0
56

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಶನ್ ಪಡೆಯುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಖಾಸಗಿ ಶಾಲೆಗಳು ‘ತಾವು ಡೊನೇಶನ್ ತೆಗೆದುಕೊಳ್ಳುವುದಿಲ್ಲ’ ಎಂದು ಬೋರ್ಡ್ ಹಾಕಬೇಕು ಹಾಗೂ ನಿಯಮದ ಪ್ರಕಾರ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯ ಒಟ್ಟು ಸಂಬಳದ ಖರ್ಚು ಹಾಗೂ 30% ಹೆಚ್ಚುವರಿ ವೆಚ್ಚವನ್ನು ಒಟ್ಟು ಮಕ್ಕಳ ಸಂಖ್ಯೆಯಿಂದ ಭಾಗಿಸಿ ಬರುವಷ್ಟು ಮೊತ್ತದ ಶುಲ್ಕವನ್ನು ಮಾತ್ರ ಪಡೆಯಬೇಕು. ಹಾಗೂ ಅದನ್ನು ಶಾಲೆಯ ನೋಟಿಸ್ ಬೋರ್ಡ್‌ನಲ್ಲೂ ಹಾಕಬೇಕು ಎಂದು ನ್ಯಾ.ಅರವಿಂದ್ ಕುಮಾರ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಪ್ರತಿ ವರ್ಷದ ಜನವರಿ 15 ರೊಳಗೆ ಎಲ್ಲ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳು ತಮ್ಮ ಪ್ರತಿ ಕೋರ್ಸಿನ ಶುಲ್ಕ ವಿವರವನ್ನು ಡಿಡಿಪಿಐಗೆ ಸಲ್ಲಿಸಬೇಕು. ಇದೇ ಅವಧಿಯೊಳಗೆ ಶುಲ್ಕ ವಿವರಗಳನ್ನು ತಮ್ಮ ಸಂಸ್ಥೆಯ ನೋಟಿಸ್ ಬೋರ್ಡ್‌ನಲ್ಲೂ ಹಾಕಬೇಕು. ಈ ಶುಲ್ಕ ಅಲ್ಲದೆ ಬೇರೆ ಯಾವುದೇ ರೀತಿಯ ಡೊನೇಶನ್ ಪಡೆಯುವುದಿಲ್ಲ ಎಂದು ಎದ್ದು ಕಾಣುವಂತೆ ಶಾಲೆಯಲ್ಲಿ ಬೋರ್ಡ್ ಹಾಕಬೇಕು. ಪ್ರತಿ ವರ್ಷ ಫೆಬ್ರವರಿ 15 ರೊಳಗೆ ಶಾಲೆಯ ಎಲ್ಲ ಸಿಬ್ಬಂದಿಯ ವೇತನ ವಿವರ, ಒಟ್ಟು ವಿದ್ಯಾರ್ಥಿಗಳ ವಿವರ ಹಾಗೂ ಅನುಮತಿ ನೀಡಲಾಗಿರುವ ವಿದ್ಯಾರ್ಥಿಗಳ ಪ್ರಮಾಣದ ಕುರಿತು ಡಿಡಿಪಿಐಗೆ ವಿವರ ಸಲ್ಲಿಸಬೇಕು. ಪ್ರತಿ ವರ್ಷ ಮಾರ್ಚ್ 30 ರೊಳಗೆ ತಮ್ಮ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ವಿವರ ಸಲ್ಲಿಸಬೇಕು. ಶಾಲೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಶುಲ್ಕ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಬಂದರೆ ಅದನ್ನು ಒಂದು ವಾರದೊಳಗೆ ಇತ್ಯರ್ಥ ಮಾಡಬೇಕು ಎಂದು ನ್ಯಾ. ಅರವಿಂದ್ ಕುಮಾರ್ ಅವರು ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವರದಿಗಾರರು: ಹಣಮಂತ ಎಂ ಮೀಶಿ ಪ್ರಜಾರಾಜ್ಯ ನ್ಯೂಸ್ ಬೆಳಗಾವಿ/ಅಥಣಿ

LEAVE A REPLY

Please enter your comment!
Please enter your name here